ಗ್ರಾಮದೇವತೆ -
ಗ್ರಾಮದ ಅಧಿಷ್ಠಾತ್ರಿ ದೈವ. ಈ ದೈವವನ್ನು ಪ್ರತಿಯೊಂದು ಗ್ರಾಮದವರೂ ತಮ್ಮ ಗ್ರಾಮಕ್ಕಾಗಿ ಸೃಷ್ಟಿಸಿ ಸ್ಥಾಪಿಸಿ ಪೂಜಿಸಲು ಪ್ರಾರಂಭ ಮಾಡಿದುದರಿಂದ ಇದಕ್ಕೆ ಗ್ರಾಮದೇವತೆಯೆಂದು ಹೆಸರಾಯಿತು. ಭಾರತದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಗ್ರಾಮಕ್ಕೂ ಒಂದು ಗ್ರಾಮ ದೇವತೆಯೂ ದೇವಸ್ಥಾನವೂ ಇವೆ. ಹಳ್ಳಿಗಳು ಅತಿ ಚಿಕ್ಕವೂ ಹತ್ತಿರದಲ್ಲಿರುವವೂ ಆದಾಗ, ಎರಡು ಮೂರು ಹಳ್ಳಿಗಳಿಗೆ ಮಧ್ಯಸ್ಥವಾಗಿ ಎಲ್ಲರಿಗೂ ಹತ್ತಿರವಾಗುವ ಸ್ಥಳದಲ್ಲಿ ಒಂದು ಗ್ರಾಮದೇವತೆಯ ದೇವಾಲಯ ಸ್ಥಾಪಿತವಾಗಿರುತ್ತವೆ. ನೂರಕ್ಕೆ ತೊಂಬತ್ತೊಂಬತ್ತು ದೇವಾಲಯಗಳು ಊರ ಹೊರಗಿರುತ್ತವೆ.

ಈ ದೇವಾಲಯಗಳು ಸ್ಥಾಪಿತವಾದ ಕಾಲ ಯಾವುದು ಎಂಬುದಕ್ಕೆ ಐತಿಹಾಸಿಕ ಆಧಾರಗಳು ದೊರೆತಿರುವುದು ಅತಿ ಸ್ವಲ್ಪ. ಆದರೆ ಜನಪದದಲ್ಲಿ ರೂಢಿಯಲ್ಲಿರುವ ಮತ್ತು ಕೆಲವು ಗ್ರಾಮದೇವತೆಗಳ ದೇವಾಲಯಗಳನ್ನು ಕುರಿತ ಐತಿಹ್ಯಗಳಿಂದ ಸಂಗ್ರಹಿತವಾದ ಅಂಶಗಳು ಹೀಗಿವೆ: ಆದಿ ಮಾನವನಿಗೆ ತಾನು ಕಂಡ ಜಗತ್ತಿನ ಬಗ್ಗೆ ಒಂದು ಬಗೆಯ ವಿಸ್ಮಯವೂ ಭಯವೂ ಮೊದಲು ಉಂಟಾಗಿರಬೇಕು. ಕ್ರಮೇಣ ಅವನು ಅಂಥ ಸೃಷ್ಟಿವೈಚಿತ್ರ್ಯಕ್ಕೆ ಕಾರಣಕರ್ತನಾದ ದೈವ ಒಂದಿರಬೇಕು ಎಂಬ ಭಾವನೆಯನ್ನು ಬೆಳೆಸಿಕೊಂಡನೆಂದು ಕಾಣುತ್ತದೆ. ಗ್ರಾಮದೇವತೆ ಮತ್ತು ಇತರ ಉಪದೇವತೆಗಳ ಕಲ್ಪನೆ ಅನಂತರ ಮೂಡಿದ್ದು. ದೇವರು ಪ್ರಪಂಚಕ್ಕೆಲ್ಲ ಹೊಣೆಗಾರ; ಅವನಿಗೆ ಕೈತುಂಬ ಕೆಲಸವಾದ್ದರಿಂದ ಆತ ಯಾವ ಕಡೆ ಅಂತ ನೋಡುತ್ತಾನೆ? ತಮ್ಮ ಕಡೆ ಗಮನಿಸುವುದಕ್ಕೆ ಅವನಿಗೆ ಹೊತ್ತು ಎಲ್ಲಿದೆ? ಆದ್ದರಿಂದ ತಾವು ದೇವರಿಗೂ ತಮಗೂ ನಡುವೆ ಒಬ್ಬ ಮಧ್ಯಸ್ಥನನ್ನು (ಸಣ್ಣ ದೇವರನ್ನು) ಏರ್ಪಡಿಸಿಕೊಂಡು ಅವನನ್ನು ತೃಪ್ತಿಪಡಿಸಿ, ಅವನ ಮೂಲಕ ಜಗತ್‍ಕರ್ತನನ್ನು ಒಲಿಸಿಕೊಳ್ಳುವುದು ಸುಲಭ ಎಂಬ ಭಾವನೆ ಬಲಿತಂತೆಲ್ಲ ಊರಿಗೊಂದÀು ಗ್ರಾಮದೇವತೆ ಸೃಷ್ಟಿಯಾಗಿರಬೇಕು. ಗ್ರಾಮಘಟಕಗಳು ಪ್ರಾರಂಭವಾದಂದಿನಿದಲೇ ಗ್ರಾಮ ದೇವತೆಯೂ ಅಸ್ತಿತ್ವಕ್ಕೆ ಬಂತು ಎಂದು ಹೇಳಬಹುದು. ಆದ್ದರಿಂದ ಗ್ರಾಮದೇವತೆಯ ಕಲ್ಪನೆ ಅತ್ಯಂತ ಪ್ರಾಚೀನ ಕಾಲಕ್ಕೆ ಅಂದರೆ ಆರ್ಯರು, ಅನಾರ್ಯರು, ಉಪನಿಷತ್ತು, ವೇದ, ಎಲ್ಲವುಗಳ ಹಿಂದಲ ಕಾಲಕ್ಕೆ ಸೇರಿದುದೆಂದು ಹೇಳಬಹುದು. ರಾಮಾಯಣ ಕಾಲಕ್ಕೂ ಹಿಂದಿನಿಂದಲೇ ಈ ದೇವತೆ ಇದ್ದಿರಬೇಕು. ಸೀತೆ ಗಂಗೆಯನ್ನು ದಾಟುವಾಗ ಗಂಗೆಯನ್ನು ಹೀಗೆ ಪ್ರಾರ್ಥಿಸುತ್ತಾಳೆ: `ನಿನ್ನ ತೀರದಲ್ಲಿರುವ ದೇವತೆಗಳಿಗೆ ಅನೇಕ ನೈವೇದ್ಯಗಳನ್ನು ಮಾಡಿಸುವೆನು. ನಿನಗೆ ಸಂತೋಷವಾಗುವ ಮರ್ಯಾದೆಯಲ್ಲಿ ಸಾವಿರ ಸುರಾಘಟಗಳನ್ನೂ ಅನೇಕ ಮಾಂಸೋಪಹಾರಗಳನ್ನೂ ಬಲಿಯಾಗಿ ಕೊಡುವೆನು. ಸೀತೆ ಹೇಳಿರುವ ದೇವತೆಗಳು ಗಂಗಾತೀರದ ಗ್ರಾಮದೇವತೆಗಳೆಂದು ಊಹಿಸಲು ಅವಕಾಶವಿದೆ.

ಹಳ್ಳಿಯ ರೈತರು ವಿವಾಹಗಳಲ್ಲಿ ಗ್ರಾಮದೇವತೆಗಳಿಗೆ ಮೊದಲ ವೀಳ್ಯ ಎತ್ತುತ್ತಾರೆ. ಈ ವೀಳ್ಯ ಎಂಬುದನ್ನು ಸಹ ಆರ್ಯರು ದ್ರಾವಿಡರಿಂದ ಅಂಗೀಕರಿಸಿದದುದರಿಂದ, ಗ್ರಾಮದೇವತೆಯ ಮೂಲ ತುಂಬಾ ಪ್ರಾಚೀನ ಕಾಲಕ್ಕೆ ಹೋಗುತ್ತದೆಂಬುದರಲ್ಲಿ ಸಂದೇಹವಿಲ್ಲ. ಅನಂತರದ ವರ್ಷಗಳಲ್ಲಿ ಇದು ಎಷ್ಟರ ಮಟ್ಟಿಗೆ ಗ್ರಾಮದ ಅವಿಭಾಜ್ಯ ಅಂಗವಾಯಿತೆಂದರೆ, ಸರ್ಕಾರದವರು ಪ್ರತಿಯೊಂದು ಗ್ರಾಮಕ್ಕೂ ಗ್ರಾಮದೇವತೆಗೂ ಉಂಬಳ ಜಮೀನನ್ನು ಕಡ್ಡಾಯವಾಗಿ ಬಿಟ್ಟು ಅದನ್ನು ಗ್ರಾಮದ ಬಾರಾಬಲೂತಿ ಲೆಕ್ಕದಲ್ಲಿ ಸೇರಿಸಿದ್ದಾರೆ. ಹೀಗೆ ಪ್ರಾಚೀನ ಕಾಲದಿಂದ ಹಿಡಿದು ಅರ್ವಾಚೀನ ಕಾಲದ ವರೆಗೆ ಗ್ರಾಮದೇವತೆ ಜನಪದ ಜೀವನದಲ್ಲಿ ಅವಿಭಾಜ್ಯವಾಗಿ ಸೇರಿಕೊಂಡು ಬಂದಿದೆ.

ಜನತೆಯ ದೃಷ್ಟಿಯಲ್ಲಿ ಗ್ರಾಮದೇವತೆಯ ಮಟ್ಟ ಅತಿ ಹೆಚ್ಚಿನದೂ ಅಲ್ಲ, ಅತಿ ಕಡಿಮೆಯದೂ ಅಲ್ಲ. ಅದರ ಕಾರ್ಯ, ಪ್ರಭಾವ, ದೃಷ್ಟಿ ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾದ್ದು. ಅಂದರೆ ಆ ಗ್ರಾಮದ ಹಿತರಕ್ಷಣೆಗಂತೂ ಗ್ರಾಮ ದೇವತೆಯೇ ಸಾರ್ವಭೌಮ. ಗ್ರಾಮದಲ್ಲಿ ಯಾರೊಬ್ಬರೂ ಅದರ ಪ್ರಭಾವದಿಂದ ಹೊರಗಾಗಲು ಸಾಧ್ಯವೂ ಇಲ್ಲ, ಅವಕಾಶವೂ ಇಲ್ಲ. ಗ್ರಾಮಕ್ಕೆ ಯಾವ ಶುಭ ದೊರಕಬೇಕಾದರೂ ಅದನ್ನು ಉಂಟುಮಾಡುವುದು, ಯಾವ ಅಪಾಯ ಒದಗಿದರೂ ಅದನ್ನು ತಪ್ಪಿಸುವುದು ಗ್ರಾಮದೇವತೆಯ ಹೊಣೆಗಾರಿಕೆ. ರೈತನ ಮನೆಯಲ್ಲಿ ಯಾರಿಗೋ ರೋಗ ಬರುತ್ತದೆ. ಎಮ್ಮೆ ಉಚ್ಚುತ್ತದೆ, ಹಾಲು ಕೊಡುವುದಿಲ್ಲ, ಗೊಬ್ಬರ ಎಷ್ಟೇ ಹಾಕಿದರೂ ಹೊಲಗದ್ದೆಗಳಲ್ಲಿ ಪೈರು ನೆರೆಯ ಜಮೀನಿನಲ್ಲಿರುವಷ್ಟು ಫಲವತ್ತಾಗುವುದಿಲ್ಲ. ಆಗ ರೈತ, ಗ್ರಾಮದೇವತೆಗೆ ಒಂದು ಹರಕೆ ಹೊರುತ್ತಾನೆ. ಕಾರ್ಯ ದೊಡ್ಡದಾಗಿದ್ದರೆ, ಅಂದರೆ ಮನೆಯ ಯಜಮಾನನಿಗೆ ಗುಣವಾಗದ ರೋಗ ಬಂದಿದ್ದರೆ, ಇಲ್ಲವೆ ದೊಡ್ಡ ಜಮೀನಿನ ವ್ಯಾಪಾರ ಕುದುರಬೇಕಾದರೆ, ಇಲ್ಲವೆ ಕೋರ್ಟು ವ್ಯಾಜ್ಯ ಗೆಲ್ಲಬೇಕಾದರೆ, ಆತ ಗ್ರಾಮದೇವಿಗೆ ತೋರಿಸುವ ಬಲಿಯ ಆಸೆ ಕೋಳಿಯಿಂದ ಕುರಿಯ ವರೆಗೆ ಹೋಗುತ್ತದೆ. ಹೀಗೆ ಪ್ರತಿಯೊಬ್ಬರೂ ತಮ್ಮ ಕಷ್ಟಗಳಿಗಾಗಿ ಗ್ರಾಮದೇವತೆಯನ್ನು ಮೊರೆಹೋಗಲೇ ಬೇಕು. ಗ್ರಾಮದೇವತೆ ಸರಿಯಾಗಿ ತನ್ನ ಕರ್ತವ್ಯವನ್ನು ಮಾಡಿ, ರೈತನಿಗೆ ಸಂತೃಪ್ತಿಯನ್ನುಂಟುಮಾಡದಿದ್ದರೆ ರೈತ ದೇವತೆಯನ್ನು ಸುಮ್ಮನೆ ಬಿಡುವುದಿಲ್ಲ. ಸಾಧಾರಣವಾಗಿ ಪ್ರತಿಗ್ರಾಮದವರೂ ತಮ್ಮ ಗ್ರಾಮದೇವತೆಗೇ ಹರಕೆ ಮಾಡಿಕೊಳ್ಳುವುದು ವಾಡಿಕೆ. ಆ ವಿಷಯದಲ್ಲಿ ಗ್ರಾಮದವರದು ಬಹುಮಟ್ಟಿಗೆ ಕಟ್ಟುನಿಟ್ಟು. ಗ್ರಾಮದೇವತೆ, ಒಂದು ಗ್ರಾಮಕ್ಕೆ ಸೇರಿದ್ದರಿಂದ, ಅದರ ಅನುಗ್ರಹ ಆ ಗ್ರಾಮದವರಿಗೇ ಮೀಸಲು. ಗ್ರಾಮದವರೂ, ಅವಳನ್ನೇ ನಂಬಿ ಸರ್ವಕ್ಕೂ ಅವಳನ್ನೇ ಯಾಚಿಸಿ ಪಡೆಯಬೇಕೆಂಬುದು ಸಾಮಾನ್ಯ ನಿಯಮ. ಆದರೆ ಹಳ್ಳಿಗಾಡಿನ ಮನುಷ್ಯ, ತುಂಬ ವ್ಯವಹಾರಜ್ಞನಾಗಿರುವುದರಿಂದ ಆತ ತನ್ನ ದೇವರನ್ನೂ ಪರೀಕ್ಷಿಸುತ್ತಾನೆ. ತನ್ನೂರ ಗ್ರಾಮದೇವತೆಗೆ ಮಾಡಿಕೊಂಡ ಹರಕೆ ಒಂದು ಸಲ ಎರಡು ಸಲ ವಿಫಲವಾದರೆ, ಆತ ದೇವತೆಯ ಮುಂದೆ ನಿಂತು, ಸಾರ್ವಜನಿಕ ಹೇಳಿಕೆಯನ್ನು ಕೊಡುವವನಂತೆ ಗಟ್ಟಿಯಾಗಿ, `ನಾನು ನಿನಗೆ ಇಂಥಿಂಥ ಹರಕೆಗಳನ್ನು ಮಾಡಿಕೊಂಡೆ. ಯಾವುದೂ ಫಲಿಸಲಿಲ್ಲ. ಎಲ್ಲದರಲ್ಲಿಯೂ ನನಗೆ ಕೆಡುಕೇ ಉಂಟಾಯಿತು. ನನ್ನ ಹರಕೆಯನ್ನೆಲ್ಲ ನೀನು ತಿಂದು ನನ್ನ ಕೈಬಿಟ್ಟುಬಿಟ್ಟೆ. ನಿನ್ನಲ್ಲಿ ಶಕ್ತಿಯೇ ಇಲ್ಲ. ನಾನು ಬೇರೆ ಅಮ್ಮನಿಗೆ ಹೋಗುತ್ತೇನೆ. ಹಟ್ಟಿಕಲ್ಲಮ್ಮನಿಗೆ ಹೋಗುತ್ತೇನೆ. ಹೊನ್ನಾಲ್ದಮ್ಮ, ಬಾಚಳ್ಳಿ ಅಮ್ಮ, ಕಿಕ್ಕೇರಿ ಅಮ್ಮ -ಇವರಿಗೆ ಹೋಗುತ್ತೇನೆ. ನನ್ನ ಮೇಲೆ ತಪ್ಪಿಲ್ಲ. ನೀನೇ ಒದ್ದು ನೂಕಿದೆ. ಎಂದು ಸಾರಿ ಹೇಳಿ, ಬೇರೆ ಊರಿನ, ಅವನ ದೃಷ್ಟಿಯಲ್ಲಿ ಪ್ರಬಲವೆಂದು ತೋರಿದ ಮತ್ತೊಂದು ದೇವತೆಗೆ ಹರಕೆ ಹೊರುತ್ತಾನೆ. ಕೆಲವು ವೇಳೆ ಮೂಗೂರು ತಿಬ್ಬಾದೇವಿ, ಉತ್ತನಹಳ್ಳಿ ಉರುಕಾಡಿ, ಗೊಂಡನಹಳ್ಳಿ ಗೊತ್ತುಕಾಡಿ, ಎಲ್ಲಕ್ಕಿಂತ ಹೆಚ್ಚಾಗಿ ಏಳುನಾಲಗೆ ದುರಗಿ- ಇವರೆಡೆ ಧಾವಿಸುತ್ತಾನೆ. ಹೀಗೆ ಮಾಡುವುದು ಕೇವಲ ಅಪರೂಪವಾದ ಮತ್ತು ವಿಶೇಷವಾದ ಸಂದರ್ಭದಲ್ಲಿ ಮಾತ್ರ. ಸಾಮಾನ್ಯ ಕಾಲದಲ್ಲಿ ರೈತ ತನ್ನ ಊರ ದೇವರನ್ನು ಬಿಟ್ಟು ಇತರ ದೇವರಿಗೆ ಹರಕೆ ಹೊತ್ತರೆ ಊರಿನವರು ಸುಮ್ಮನಿರುವುದಿಲ್ಲ. ಹಾಗೆಯೇ ಬೇರೆ ಊರಿನವರೂ ತಮ್ಮೂರ ದೇವರಿಗೆ ಒಂದು ಹರಕೆ ಹೊತ್ತರೆ ಸಾಧಾರಣವಾಗಿ ಸುಮ್ಮನಿರುವುದಿಲ್ಲ. ಆದರೆ ಒಂದೂರಿನ ದೇವರಿಗಿಂತ ಮತ್ತೊಂದೂರಿನ ದೇವರು ಹೆಚ್ಚು ಪ್ರಬಲ, ಫಲದಾಯಕ ಎಂದು ತೋರಿದರೆ, ಪ್ರಾಪಂಚಿಕ ವಿಷಯದಲ್ಲಿ ಜಾಣರಾದ ರೈತರು ಆ ದೇವರಿಗೆ ಹೋಗುವವರನ್ನು ತಪ್ಪಿಸುವುದಿಲ್ಲ. ಈ ವಿಷಯದಲ್ಲಿ ಹಳ್ಳಿಯ ನಿಯಮ ಹಿಂದಲ ಕಾಲದ ಗ್ರಾಮ ಘಟಕ ಪದ್ಧತಿಯಂತೆ. ಒಂದು ವಿಶೇಷ ಸಂದರ್ಭಕ್ಕಾಗಿ ರೈತ ಬೇರೆ ಊರಿನ ದೇವರಿಗೆ ಹರಕೆ ಹೊತ್ತರೂ ಅದು ಆ ಸಂದರ್ಭವಷ್ಟಕ್ಕೆ ಮಾತ್ರ. ಉಳಿದ ಅವನ ಎಲ್ಲ ಆಗುಹೋಗುಗಳಿಗೂ ಅವನು ತನ್ನ ಗ್ರಾಮದೇವತೆಯನ್ನು ಮಾತ್ರವೇ ಶರಣು ಹೋಗಬೇಕೆಂಬುದು ನಿಯಮ.

ಗ್ರಾಮದೇವತೆಯಷ್ಟೇ ಅದರ ಪೂಜಾರಿಯೂ ಆರ್ಷೇಯ. ಈ ದೇವತೆ ಪ್ರಾಣಿಬಲಿಯನ್ನು ಅಪೇಕ್ಷಿಸುವ ದೇವರಾದರೂ ಇದರ ಪೂಜಾರಿ ಸಾಧಾರಣವಾಗಿ ವೀರಶೈವ ತಮಡಿ (ಅರ್ಚಕ) ಆಗಿರುತ್ತಾನೆ. ಆ ತಮಡಿ ಸಿಕ್ಕದಿದ್ದಲ್ಲಿ ದೇವರಿಗೆ ಹರಕೆಯನ್ನಾಗಲಿ ಬಲಿಯನ್ನಾಗಲಿ ಒಪ್ಪಿಸಬೇಕಾದ ಭಕ್ತ, ಅಂಥ ತಮಡಿ ಬೇರೆ ಗ್ರಾಮದಲ್ಲಿದ್ದರೂ ಹೋಗಿ ಕರೆದುಕೊಂಡು ಬಂದು, ಅವನ ಹಸ್ತದಿಂದಲೇ ಪೂಜೆ ನೆರವೇರಿಸುತ್ತಾನೆ. ಪೂಜಾರಿಗೆ ಕೆಲಸವೂ ಹೆಚ್ಚಿಗೆ ಇಲ್ಲ. ಭಕ್ತ ತಂದಿರುವ ಬಲಿಗೆ ಕೋಳಿ, ಕುರಿ ಅಥವಾ ಆಡು ಪೂಜೆ ಮಾಡಿದ ದೇವರ ತೀರ್ಥವನ್ನು ಪ್ರೋಕ್ಷಿಸುವುದಷ್ಟೇ ಅವನ ಕೆಲಸ. ಮುಂದಲ ಕ್ಷಣದಲ್ಲಿಯೇ ಭಕ್ತರು ಪ್ರಾಣಿಯ ಕತ್ತನ್ನ ಕತ್ತರಿಸಿ ಹಾಕುತ್ತಾರೆ. ಮೊಸರನ್ನ ನೆನೆಯಕ್ಕಿ ನೆನಗಡಲೆ ಪನಿವಾರ ಮುಂತಾದ ತಳಿಗೆಗಳನ್ನು ಸುಮಂಗಲಿಯರು ತಂದು ಒಪ್ಪಿಸುವಾಗ ಪೂಜಾರಿ ಇಲ್ಲದಿದ್ದರೂ ನಡೆಯುತ್ತದೆ.

ಗ್ರಾಮದೇವತೆ ಒಂದು ವಿಗ್ರಹವೇ ಆಗಿರಬೇಕೆಂಬ ನಿಯಮವಿಲ್ಲ. ಅನೇಕ ವೇಳೆ ಅದೊಂದು ಬರಿಯ ಕಲ್ಲು ಆಗಿರಬಹುದು ; ಇನ್ನೂ ಕೆಲವು ವೇಳೆ ನಾಲ್ಕಾರು ಗುಂಡುಕಲ್ಲುಗಳನ್ನು ಒಂದರ ಮೇಲೆ ಒಂದನ್ನು ಜೋಡಿಸುತ್ತಾರೆ. ಕಲ್ಲಿನ ಮೇಲೆ ಏನಾದರೂ ಮೂಗು ಬಾಯಿ ಕಣ್ಣ್ಣುಗಳನ್ನು ಕೊರೆದಿದ್ದರೂ ಗೊತ್ತಾಗುವುದಿಲ್ಲ. ಕಲ್ಲೆಲ್ಲ ಪೂರ್ತ ಎಣ್ಣೆ ಅರಸಿನ ಕುಂಕುಮದಿಂದ ಮೆತ್ತಿ ಹೋಗಿರುತ್ತದೆ. ಹೀಗೆ ಸಹಸ್ರಾರು ವರ್ಷಗಳಿಂದ ದೇವತೆ ಎಣ್ಣೆ ಕುಡಿದು ಎಣ್ಣೆಯಲ್ಲಿ ಮಜ್ಜನ ಮಾಡಿರುತ್ತದೆ.
ಪ್ರಾಚೀನ ಆದಿಮಾನವ ಪೂಜಿಸಿದ ಶಕ್ತಿದೇವತೆಯೇ ಇಂದಿನ ಗ್ರಾಮದೇವತೆ ಎಂದು ಭಾವಿಸಬಹುದು. ಈಚೆಗೆ ಕರ್ನಾಟಕದ ಕೆಲವು ಊರುಗಳಲ್ಲಿ ಈ ದೇವತೆಯನ್ನು ಉಡಿಸಲಮ್ಮ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ಎಲ್ಲ ಗ್ರಾಮಗಳಲ್ಲಿಯೂ ಸಾಧಾರಣವಾಗಿ ಗ್ರಾಮದೇವತೆ ಇರುವುದು ಮಾಮೂಲು ಆದರೂ ಗ್ರಾಮದೇವತೆಗಳು ಇಲ್ಲದ ಗ್ರಾಮಗಳೂ ಉಂಟು. ಮಾರಿಯಮ್ಮನೇ ಗ್ರಾಮದೇವತೆಯಾಗುತ್ತಾಳೆ. ಆಕೆ ಗ್ರಾಮದೇವತೆಗಿಂತ ಸ್ವಲ್ಪ ಹೆಚ್ಚಿನ ಮಟ್ಟದ ಶಕ್ತಿದೇವತೆಯೇ ಹೊರತು ಚಂಡಿ ಚಾಮುಂಡಿ ಕಾಳಿಕಾ ದುರ್ಗಿ ಮುಂತಾದ ದೇವತೆಗಳಿಗೂ ಮಾರಿಯಮ್ಮನಿಗೂ ಸಂಬಂಧವಿಲ್ಲ.
ಹಳ್ಳಿ ದೊಡ್ಡದಾಗಿದ್ದರೆ, ಗ್ರಾಮದೇವತೆಗೆ ವರ್ಷಕ್ಕೆ ಒಂದು ಬಾರಿ ಬಂಡಿ ಹಬ್ಬ ಅಥವಾ ರಥೋತ್ಸವ ನಡೆಯುತ್ತದೆ. ಈ ಹಬ್ಬವನ್ನು ಹಸಿರು ಬಂಡಿ ಎಂದೂ ಕರೆಯುತ್ತಾರೆ. ಹಸಿರು ಎಲೆ ಚಿಗರುಗಳ ತೋರಣ, ತೆಂಗಿನ ಗರಿ, ಅಡಕೆ ಹೊಂಬಾಳೆ ಇವುಗಳಿಂದ ಬಂಡಿಯನ್ನು ಅಲಂಕರಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಈ ಹಬ್ಬ ನಡೆಯುವುದು ಸಾಧಾರಣವಾಗಿ ಮಂಗಳವಾರ. ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಸುತ್ತಮುತ್ತಲ ಹಳ್ಳಿಗಳಲ್ಲೆಲ್ಲ ಮೊದಲೇ ಸಾರಿಸುತ್ತಾರೆಯಾದ್ದರಿಂದ ಬಾಳೆ ಕಂಬಗಳು ಲೆಕ್ಕವಿಲ್ಲದಷ್ಟು ಬಂದು ಬೀಳುತ್ತವೆ. ಗ್ರಾಮದೇವತೆಯ ವಿಗ್ರಹವನ್ನು ತಾತ್ಕಾಲಿಕವಾಗಿ ಮಣ್ಣಿನಲ್ಲಿ ಬಹು ಸುಂದರವಾಗಿ ನಿರ್ಮಿಸಿರುತ್ತಾರೆ. ಅಕ್ಕಿ, ತೆಂಗಿನಕಾಯಿ ರಾಸಿರಾಸಿ ಬಿದ್ದಿರಲಾಗಿ ಗ್ರಾಮದೇವತೆ `ಒಕ್ಲೂನ ಹಾಸ್ಕೊಂಡು ಒಕ್ಲೂನ ಹೊದ್ದು, ಕಿವಿಯಲ್ಲಿ ಮುತ್ತಿಕ್ಕಿದ ಓಲೆ ತೊಟ್ಟು ಕಿಡಗಣ್ಣಿಯಾಗಿ' ಮರೆಯುತ್ತಾಳೆ. ಭಕ್ತರು ಬಾಗಿಲಿಗೆ ಛತ್ರಿ ಏರಿಸುತ್ತಾರೆ. ಏಳೂರು ಸಿಡಿಗಳು ಬರುತ್ತವೆ. ಹೆಡಗೇಲಿ ಹಣ್ಣು, ಗಡಿಗೇಲಿ ತುಪ್ಪ, ಇಡಗಾಯಿಗಳು, ಕುರಿಗಳ ಸಾಲು ಮಡಲಕ್ಕಿ-ಎಲ್ಲ ಬರುತ್ತವೆ. ಕೆಲವರು ಊರುಗಳಲ್ಲಿ ಕೊಂಡವನ್ನು ಸಹ ಹಾಯುತ್ತಾರೆ. ಮೆರವಣಿಗೆಯಲ್ಲಿ ದೊಡ್ಡದೊಡ್ಡ ಪಂಜುಗಳು ಉರಿಯುತ್ತವೆ. ಭಕ್ತರು ಭಕ್ತಿಯಿಂದ ದೇವತೆಯ ಹಾಡನ್ನು ಹಾಡುತ್ತಾರೆ. ದೇವತೆಯ ಮಹಿಮೆಯನ್ನು ಬಣ್ಣಿಸಲು ಅಸದಳ. `ಸಾಸಿವೆ ಕಾಳಷ್ಟು ರೇಸಿಮೆ ಉಟುಕೊಂಡು ಏಸೊಂದುಯ್ದವಳೆ ನೆರಿಗೇಯ, ತಾಯವ್ವ ಕೋಟೆಗೆ ಬೀಸವ್ಲೆ ಕುಡಿಸೆರೆಗ (ಅಮ್ಮ ಧರಿಸಿರುವುದು ಸಾಸಿವೆಕಾಳಿನಷ್ಟು ರೇಸಿಮೆ. ಆದರೆ ತನ್ನ ಮಹಿಮೆಯಿಂದ ಅದರಿಂದಲೇ ವಿಶಾಲವಾದ ನೆರಿಗೆಯನ್ನು ರಚಿಸಿಕೊಂಡು ಕೋಟೆವರೆಗೆ ಸೆರಗನ್ನು ಬೀಸುತ್ತಾಳೆ). ಬಂಡಿಯ ಮೇಲೆ ಮೆರವಣಿಗೆ ಹೋಗುತ್ತಿರಬೇಕಾದರೆ, ಬಿಸಿಲಿನಲ್ಲಿ ದೇವತೆಯ ಓಲೆ, ಹೊಳೆಯುತ್ತದೆ. ಆಚೆ ಈಚೆ ದಾಸ ಮತ್ತು ಪುರುಷ (ಧಾರ್ಮಿಕ ಪೂಜಕರು) ಇರುತ್ತಾರೆ. ದಾಸ, ಹೆಗಲಮೇಲೆ ಕಿರುಗಂಟೆ ಕಟ್ಟಿದ ಒಂದು ಒನಕೆ, ಎಡಕಂಕುಳಲ್ಲಿ ಕಡಾಸು, ಬವನಾಸಿ, ಬಲ ಕಂಕುಳಲ್ಲಿ ತುತ್ತೂರಿ ಭಾಂಕಿ ಶಂಖ, ಎದೆಯ ಮೇಲೆ ಆನೆಯ ವಿಗ್ರಹ ಬಲಗೈಯಲ್ಲಿ ಜಾಗಟೆ ಹಿಡಿದಿರುತ್ತಾನೆ. ಪುರುಷ, ಭೈರವನ ಶಿಷ್ಯ. ಆತ ಕಬ್ಬಿಣದ ದೊಡ್ಡ ತ್ರಿಶೂಲ, ಬೆಳ್ಳಿಯ ಸಣ್ಣ ತ್ರಿಶೂಲಗಳನ್ನು ಸೇರಿದ ನವಿಲುಗರಿ ಕಂತೆಯನ್ನು ಹೆಗಲ ಮೇಲೆ ಇಟ್ಟುಕೊಂಡು ಕಂಕುಳಲ್ಲಿ ವಿಭೂತಿ ಚೀಲ ಕೈಯಲ್ಲಿ ಜಿಂಕೆಯ ಕೊಂಬಿನ ವಾದ್ಯ, ತೀರ್ಥದ ಬಟ್ಟಲು-ಇವನ್ನು ಹಿಡಿದಿರುತ್ತಾನೆ. ಸುಮಂಗಲಿಯರು ಐರಣಿ (ಪಂಚಕಲಶ) ಹೊತ್ತು ನಡೆಯುವರು. ಒಬ್ಬ ಆಚಾರಿ ಬಣ್ಣ ಹಾಕಿದ ಮರದ ಕುದುರೆಯ ಒಂದು ಕತ್ತನ್ನು ಕಂಕುಳಲ್ಲಿ ಹಿಡಿದುಕೊಂಡು ಕುಣಿಯುತ್ತಾನೆ. (ಹಿಂದೆ ಒಂದು ಸಲ ಬಸವ, ಈಶ್ವರನ ಸನ್ನಿಧಿಗೆ ಹೋಗಿ ಹಿಂದಿರುಗದೆ ಇದ್ದುದರಿಂದ ಭೂಲೋಕದ ಆಚಾರಿಗಳು (ಬಡಗಿ)ಗಳು ಒಂದು ಕೀಲುಕುದುರೆ ಮಾಡಿ, ಈಶ್ವರನ ಬಳಿಗೆ ಕೊಂಡುಹೋಗಿ ಅದರಿಂದಲೇ ಬೇಸಾಯ ಮಾಡುವುದಾಗಿ ಹೇಳಿದರಂತೆ. ಸೃಷ್ಟಿ ಒಮ್ಮುಖವಾಗಿರಲಿ ಎಂದು ಯೋಚಿಸಿ ಈಶ್ವರ ಬಸವನನ್ನು ಭೂಲೋಕಕ್ಕೆ ಕಳುಹಿಸಿದನೆಂದು ಒಂದು ಜಾನಪದ ಕಥೆ ಇದೆ.)

ಗ್ರಾಮದೇವತೆಗೆ ಅಪಾರ ಹರಕೆಗಳು ಬರುತ್ತವೆ. ಹರಕೆ ಹೊತ್ತವರೆಲ್ಲ ತಮ್ಮ ತಮ್ಮ ಮತಿಗನುಗುಣವಾಗಿ ಹರಕೆ ತಂದು ಒಪ್ಪಿಸುತ್ತಾರೆ. ಆಡು, ಕುರಿ, ಅಸಂಖ್ಯಾತ ಕೋಳಿಗಳು ಬಲಿಯಾಗುತ್ತವೆ. ಭಕ್ತರು ಮಾಲೆ, ಕಣ್ಕಪ್ಪು ಎಲ್ಲವನ್ನೂ ತಂದು ಅಮ್ಮನಿಗೆ ಒಪ್ಪಿಸುತ್ತಾರೆ; ತಾಯಿಯರು ಮಗುವಿಗೆ ಹೆಸರಿಡು ಎಂದು ಬೇಡುತ್ತಾರೆ. ಕೋಲಾಟ ದೊಣ್ಣೆವರಸೆ, ಪಟ್ಟಾವರಸೆ, ರಮಡೋಲು, ವಾದ್ಯ, ಬಾಣಬಿರುಸು - ಎಲ್ಲ ನಡೆಯುತ್ತದೆ. ಬಂಡಿಹಬ್ಬಕ್ಕೂ ಹಂದಿ ಮಾಂಸಕ್ಕೂ ಗಂಟು. ಸೋನೆಮಳೆ ಆಗ ತಾನೇ ಪ್ರಾರಂಭವಾಗುತ್ತಿರುವುದರಿಂದ ಅದರ ಪ್ರಭಾವದಿಂದ ಹಂದಿ ಮಾಂಸಕ್ಕೆ ಒಂದು ಸೊಗಡೂ ರುಚಿಯೂ ಬರುತ್ತದೆಂದು ರೈತರ ನಂಬಿಕೆ. ಆದ್ದರಿಂದಲೇ ಬಂಡಿಹಬ್ಬದಂದು ಊರಿನ ಜನಸಂಖ್ಯೆಗನುಗುಣವಾಗಿ ನಾಲ್ಕು ಆರು ಎಂಟು ಹಂದಿಗಳನ್ನು ಕೊಂದು ಊಟವೇರ್ಪಡಿಸುತ್ತಾರೆ. ಅನಂತರ ತಮಟೆಗಳ ರಣವಾದ್ಯದ ಗತ್ತಿಗನುಗುಣವಾಗಿ ಕೈಯಲ್ಲಿ ಕೆಂಪು ವಸ್ತ್ರದ ಚೌಕಗಳನ್ನು ಹಿಡಿದುಕೊಂಡು ಆಯಾಸವಾಗುವ ವರೆಗೆ ವೀರಕುಣಿತವನ್ನು ಕುಣಿಯುತ್ತಾರೆ. ಕೊಂಬು ಕಹಳೆ ತುತ್ತೂರಿ ಭಾಂಕಿ ಕುಣಿಮಿಣಿ ತಾಳ ತಮಟೆ ಮೋರಿಗಳ ಕೋಲಾಹಲದೊಂದಿಗೆ ಕುಣಿತ ಕೊನೆಯಾಗುತ್ತದೆ.

ಹೀಗೆ ಮಾನವನ ಊಹನೆಯ, ಆವಶ್ಯಕತೆಯ, ಅತ್ಯಂತ ಪ್ರಾಚೀನ ಶಕ್ತಿದೇವತೆಯಾದ ಗ್ರಾಮದೇವತೆ, ಜನರ ಬಾಳಿಗೆ ಪೌರುಷ ಸಾಹಸ ಕಷ್ಟ ಸಹಿಷ್ಣುತೆ ದುಷ್ಟ ನಿಗ್ರಹ ಶಿಷ್ಟಪರಿಪಾಲನ ಶಕ್ತಿಗಳನ್ನು ನೀಡಿ ಜನತೆಯನ್ನು ರಕ್ಷಿಸಿಕೊಂಡು ಬರುತ್ತಿದೆ.
(ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ